ಬ್ರೈಟ್, ರಿಚರ್ಡ್   1789-1858. ಮೂತ್ರಪಿಂಡದ ರೋಗ ಲಕ್ಷಣಗಳನ್ನು ಮೊದಲು ವಿಶಿಷ್ಟವಾಗಿ ವರ್ಣಿಸಿ ಹೆಸರಾದ, ಬ್ರಿಸ್ಟಲಿನಲ್ಲಿ ಹುಟ್ಟಿದ ಇಂಗ್ಲಿಷ್ ವೈದ್ಯ. ಎಡಿನ್‍ಬರೋ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರ ಮತ್ತು ಗಣಿತ ಓದಿದ. ವೈದ್ಯ ಶಿಕ್ಷಣ ಪಡೆದು (1809) ಜಿ.ಎಸ್. ಮೆಕೆಂಜಿ ಮತ್ತು ಹೆನ್ರಿ ಹಾಲೆಂಡ್ ಇವರೊಂದಿಗೆ ಐಸ್ಲೆಂಡ್ ಪ್ರವಾಸ ಮಾಡಿ (1811) ಅಲ್ಲಿಯ ಪ್ರಾಣಿ ಹಾಗೂ ಸಸ್ಯವಿಜ್ಞಾನಗಳ ಬಗೆಗೆ ತನ್ನ ಅನುಭವಗಳನ್ನು ಪ್ರಕಟಿಸಿದ್ದಾನೆ. ಹಿಂತಿರುಗಿದ ಮೇಲೆ ವಿದ್ಯಾರ್ಥಿಯಾಗಿ ಗೈಸ್ ಆಸ್ಪತ್ರೆ ಸೇರಿ 1812ರಲ್ಲಿ ಎಡಿನ್‍ಬರೋಗೆ ಹೋಗಿ ಅದೇ ವರ್ಷ ಎಂ. ಡಿ. ಪದವೀಧರನಾದ. ಗೈಸ್ ಆಸ್ಪತ್ರೆಯಲ್ಲಿದ್ದ ಆಗಿನ ವೈದ್ಯರಲ್ಲಿ ಇವನಷ್ಟು ಹೆಸರಾದವರು ಮತ್ತಾರೂ ಇರಲಿಲ್ಲ. 1821ರಲ್ಲಿ ರಾಯಲ್ ಸೊಸೈಟಿಯ ಫೆಲೊ ಆಗಿಯೂ 1832ರಲ್ಲಿ ವೈದ್ಯರ ರಾಯಲ್ ಸೊಸೈಟಿಯ ಫೆಲೊ ಆಗಿಯೂ 1837ರಲ್ಲಿ ಮಹಾರಾಣಿ ವಿಕ್ಟೋರಿಯಾಳ ಅತಿ ವಿಶಿಷ್ಟ ವೈದ್ಯನಾಗಿಯೂ ಆಯ್ಕೆಗೊಂಡು ಕೀರ್ತಿಭಾಜನನಾದ.

	ಬ್ರೈಟ್ ಮೊದಲು ಗೈಸ್ ಆಸ್ಪತ್ರೆಯಲ್ಲಿ ಸಸ್ಯವಿಜ್ಞಾನ ಮತ್ತು ಔಷಧ ಮೂಲಿಕೆಗಳ ಮೇಲೆ ಪಾಠ ಹೇಳುತ್ತಿದ್ದ. ಮುಂದೆ ಗೆಳೆಯ ತಾಮಸ್ ಅಡಿಸನ್ನನೊಂದಿಗೆ ವೈದ್ಯ ಶಿಕ್ಷಕನಾಗಿದ್ದ. ಅವನೊಡಗೂಡಿ ವೈದ್ಯಗಾರಿಕೆಯ ಮೂಲಸೂತ್ರಗಳು ಎಂಬ ಪುಸ್ತಕ (1839) ಬರೆದ. ಮೂತ್ರಪಿಂಡ ರೋಗಗಳಲ್ಲಿಯೇ ಬ್ರೈಟ್ ವಿಶೇಷ ಪರಿಣತಿ ಪಡೆದಿದ್ದರೂ ಸಾಮಾನ್ಯ ವೈದ್ಯನಾಗಿ ತನ್ನ ಕರ್ತವ್ಯವನ್ನು ಎಂದೂ ಕಡೆಗಣಿಸಿದವನಲ್ಲ. ಮೂತ್ರಪಿಂಡ ರೋಗಗಳು, ಹೊಟ್ಟೆಯ ಗಡ್ಡೆಗಳು ಮತ್ತು ಜ್ವರ ಇವನ್ನೂ ರೋಗ ಹತ್ತದ ಮಿದುಳಿನ ಧಮನಿಗಳನ್ನೂ ಕುರಿತು ನಡೆಸಿದ ಇನ್ನಷ್ಟು ಸಂಶೋಧನೆಗಳನ್ನು ಈತ 'ಗೈಸ್ ಆಸ್ಪತ್ರೆಯ ವರದಿಗಳು ಎಂಬ ಪತ್ರಿಕೆಯಲ್ಲೂ ಇತರ ಪತ್ರಿಕೆಗಳಲ್ಲೂ ಪ್ರಕಟಿಸಿದ (1836-43). ಮೂತ್ರಪಿಂಡದ ಉರಿತವನ್ನೂ ಗುಂಡಿಗೆಯಿಂದೇಳುವ ಶೋಬೆಗೂ ಮೂತ್ರಪಿಂಡದಿಂದೇಳುವುದಕ್ಕೂ ಇರುವ ವ್ಯತ್ಯಾಸಗಳನ್ನು ಗುರುತಿಸುವ ರೋಗದ ಅಂಗರಚನೆಯ ಅಭ್ಯಾಸದ ಮೂಲಕ ರೋಗಗಳ ಲಕ್ಷಣಗಳನ್ನೂ ಚಿಹ್ನೆಗಳನ್ನೂ ನಿದರ್ಶಿಸುವ ನಿಟ್ಟಿನಿಂದ ಆಯ್ದ ವೈದ್ಯಕೀಯ ರೋಗಿಗಳ ವರದಿಗಳು ಎಂಬ ಗ್ರಂಥ (1827) ಇಡೀ ವೈದ್ಯ ಪ್ರಪಂಚಕ್ಕೇ ಮಾರ್ಗೀಯವಾಗಿತ್ತು. ಶೋಬೆಗೆ ಕಾರಣವಾಗಿ ಇವನು ಮೊತ್ತಮೊದಲು ವಿವರಿಸಿದ ಮೂತ್ರಪಿಂಡಗಳ ಕೀವಿಲ್ಲದ ಉರಿತದ ರೋಗಗಳೆಲ್ಲ ಬ್ರೈಟನ ರೋಗವೆಂದೇ ವೈದ್ಯಕೀಯದಲ್ಲಿ ಹೆಸರು ಪಡೆದಿವೆ. ಕೇಂದ್ರ ನರಮಂಡಲದ ಶೋಧನೆಗಳಾಗಿ ಮಿದುಳು, ಮಿದುಳಪೊರೆ, ಬೆನ್ನು ಹುರಿ ಇವುಗಳ ರೋಗಗಳನ್ನು ಮತ್ತು ಈಲಿಯನ್ನು ಕುರಿತು ಬರೆದು ಎರಡನೆಯ ಸಂಪುಟವಾಗಿ ಪ್ರಕಟಿಸಿದ.	(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ